ಆಂಟಿಮೊನಿ
ಪರಮಾಣು ಸಂಖ್ಯೆ 51, ರಸಾಯನಿಕ ಪ್ರತೀಕ Sb, ಪರಮಾಣು ಭಾರ 121.76. ಹಾಗೂ ದ್ರವ್ಯರಾಶಿ 121 (56%) ಮತ್ತು 123 (44%) ಇರುವ ಸಮಸ್ಥಾನಿಗಳಿವೆ. ಆವರ್ತ ಕೋಷ್ಟಕದ ಐದನೆ ಗುಂಪಿನಲ್ಲಿದೆ. ಲೋಹದ ಮುಖ್ಯ ಅದುರು ಸ್ಟಿಬ್ನೈಟ್. ಗ್ರಾಫೈಟ್ ಮೂಸೆಗಳಲ್ಲಿ ಅದಿರನ್ನು ಪೊಟಾಸಿಯಂ ನೈಟ್ರೇಟ್‍ನೊಡನೆ ಕಾಯಿಸಿ, ಬಂದ ಆಕ್ಸೈಡ್‍ನ್ನು ಇದ್ದಿಲು ಪುಡಿಯೊಡನೆ ಕಾಯಿಸುವುದರಿಂದ ಆಂಟಿಮೊನಿಯನ್ನು ಪಡೆಯಬಹುದು. ಇದು ಬೆಳ್ಳಿಯ ಹೊಳಪುಳ್ಳ ಲೋಹ, ಸಾಪೇಕ್ಷ ಸಾಂದ್ರತೆ 6.7. ಗಾಳಿಯಲ್ಲಿ ಸ್ಥಿರ. ಬಹಳ ಕಾಯಿಸಿದಾಗ ಮಾತ್ರ ಉರಿದು ಆಂಟಿಮೊನಿ ಆಕ್ಸೈಡ್ ಹಬೆಯನ್ನು ಕೊಡುತ್ತದೆ. ಇದೂ ಸಹ ಅನೇಕ ರೂಪಾಂತರಗಳನ್ನು ಹೊಂದಿರುತ್ತದೆ. ದುರ್ಬಲ ಆಮ್ಲಗಳಲ್ಲಿ ಇದು ಕರಗುವುದಿಲ್ಲವಾದರೂ ಪ್ರಬಲ ಆಮ್ಲಗಳೊಡನೆ ಅವುಗಳಿಗನುಸಾರವಾಗಿ ಲವಣಗಳನ್ನು ಕೊಡುತ್ತದೆ. ಇದರ ಇತರ ಗುಣಗಳು ಹೆಚ್ಚು ಕಡಿಮೆ ಆರ್ಸೆನಿಕ್ ಗುಣಗಳಂತೆಯೇ. ವಾಣಿಜ್ಯದಲ್ಲಿ ಇದರ ಹೆಚ್ಚಿನ ಉಪಯೋಗ ಮಿಶ್ರಲೋಹಗಳ ತಯಾರಿಕೆಯಲ್ಲಿ. ಇದರಿಂದ ಉಂಟಾದ ಮಿಶ್ರಲೋಹಗಳು ಕಡಿಮೆ ಉಷ್ಣದಲ್ಲಿ ಕರಗುವುದರಿಂದ ಅವುಗಳನ್ನು ಮುದ್ರಣದ ಮೊಳೆಗಳು, ಎರಕದ ಸಾಮಾನುಗಳು ಇವುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಆಂಟಿಮೊನಿಯ ಮಿಶ್ರಲೋಹಗಳಲ್ಲಿ ಮುಖ್ಯವಾದವುಗಳು: ಬ್ರಿಟಾನಿಯಾ ಲೋಹ-ಆಂಟಿಮೊನಿ, ಸತುವು ಮತ್ತು ತಾಮ್ರ; ಟೈಪ್‍ಲೋಹ ಸೀಸ, ಆಂಟಿಮೊನಿ ಮತ್ತು ಸತುವು 10, ಇದರ ಒಂದು ಮುಖ್ಯ ಸಂಯುಕ್ತವಾದ ಟಾರ್ಟರ್ ಎಮಿಟಿಕ್ ಅಥವಾ ಪೊಟಾಸಿಯಂ ಆಂಟಿಮೊನೈಲ್ ಟಾರ್ಟೆರೇಡನ್ನು ಔಷಧವಾಗಿ ಮತ್ತು ಬಟ್ಟೆಗಳಿಗೆ ಬಣ್ಣ ಹಾಕಲು, ಕೈಗಾರಿಕೆಗಳಲ್ಲಿ ಬಳಸುವ ಮಾರ್ಡೆಂಟ್ ಆಗಿ ಉಪಯೋಗಿಸಲಾಗುತ್ತಿದೆ.

ಆರ್ಸೆನಿಕ್‍ನಂತೆಯೇ ಮತ್ತೊಂದು ವಿಷವಸ್ತುವಾದ ಅಂಟಿಮೊನಿಯಾ ಬಳಕೆ ಹಿಂದಿನ ಕಾಲದ ಅರಬ್ಬರಿಗೆ ಪರಿಚಯವಿದ್ದಂತೆ ತೋರುತ್ತದೆ. ಅರಬ್ಬಿ ಹೆಂಗಸರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸೌಂದರ್ಯೋತ್ತೇಜಕ (ಮುಖ್ಯವಾಗಿ ಹುಬ್ಬುಗಳನ್ನು ತಿದ್ದಿ, ಕಪ್ಪಿಡುವ ಸಲುವಾಗಿ) ವಸ್ತುವಾಗಿ ಇದನ್ನು ಉಪಯೋಗಿಸುತ್ತಿದ್ದರೆಂಬುದಕ್ಕೆ ಕೆಲವು ದಾಖಲೆಗಳೂ ಇವೆ.		

 (ಎಸ್.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ